ಥೈಮಸ್ -
ಕೆಳಕುತ್ತಿಗೆ ಹಾಗೂ ಎದೆಯ ಮೇಲು ಭಾಗಗಳಲ್ಲಿ ತೈರಾಯ್ಡ್ ಗ್ರಂಥಿಯ ಕೆಳಗಿನಿಂದ 4 ನೆಯ ಪಕ್ಕೆಲುಬಿನವರೆಗೆ ಪಸರಿಸಿ ಎದೆಮೂಳೆ ಹಿಂದೆ ಇರುವ ಚಪ್ಪಟೆ ಹಾಗೂ ಮೃದುವಾದ ಒಂದು ಅಂಗ. ಇದರ ಎಡಬಲ ಪಸರಿಕೆಗಳನ್ನು ಗುರತಿಸಬಹುದು. ಇವು ಗುಂಡಿಗೆ ಶ್ವಾಸನಾಳಗಳ ಮೇಲೆ ಕವುಚಿಕೊಂಡಿರುತ್ತವೆ. ಜನನವಾದಾಗ ಥೈಮಸ್ಸಿನ ತೂಕ ಶಿಶುವಿನ ತೂಕದ 0.42% ರಷ್ಟು - ಸುಮಾರು 12 ಗ್ರಾಮ್‍ಗಳು. ವ್ಯಕ್ತಿತೂಕಕ್ಕೆ ಹೋಲಿಸಿದರೆ ಇದೇ ಗರಿಷ್ಠ ಅನುಪಾತ. ಮುಂದೆ ಪ್ರಬುದ್ಧತೆವರೆಗೂ ಥೈಮಸ್ ವೃದ್ಧಿ ಆಗಿ, ಪರಮಾವಧಿ ತೂಕ ಸುಮಾರು 37 ಗ್ರಾಮ್‍ಗಳಷ್ಟಾಗುತ್ತದೆ. ಅನಂತರ ಕುಗ್ಗುತ್ತ ಬಂದು ವಾರ್ಧಿಕ್ಯದಲ್ಲಿ ಸುಮಾರು 6 ಗ್ರಾಮ್‍ಗಳಷ್ಟು ಮಾತ್ರವಿರುತ್ತದೆ. ಅನೇಕ ವ್ಯಕ್ತಿಗಳಲ್ಲಿ ಸೋಂಕು, ಅಪಘಾತ ಇತ್ಯಾದಿ ಕಾರಣಗಳಿಂದ ಥೈಮಸ್ ನಡುವಯಸ್ಸಿನಲ್ಲಿ ಉಡುಗಿಹೋಗುವುದೂ ಉಂಟು.

ಥೈಮಸ್ಸನ್ನು ಪೂರ್ಣವಾಗಿಮುಚ್ಚಿಕೊಂಡು ಒಂದು ಹೊದಿಕೆ ಇದೆ. ಇದರ ಒಳಗೆ ಇರುವುದು ತಿರುಳು (ಪ್ಯಾರೆನ್‍ಕೈಮ) ತಿರುಳಿನ ಹಾಲೆಗಳು ಬಲು ಚಿಕ್ಕವು - ಗರಿಷ್ಠ 1 - 2 ಮಿಲಿಮೀಟರುಗಳಷ್ಟು. ಜಾಲ ಚಾಚುಗಳ್ಳುಳ್ಳ ಕೋಶಗಳ ಜಾಲದಲ್ಲಿ ದುಗ್ಧರಸಕಣಗಳು ಒತ್ತಾಗಿ ತುಂಬಿಕೊಂಡು ತಿರುಳು ನಿರ್ಮಿತವಾಗಿದೆ. ಪ್ರತಿಯೊಂದು ಹಾಲೆಯ ಒಳಭಾಗದ ರಚನೆ ಸಡಿಲ. ಅಲ್ಲಿ ಕಣಗಳ ಒತ್ತಾಗಿರುವುದಿಲ್ಲ. ಇಂಥ ಸ್ಥಳಗಳಲ್ಲ ಮಾತ್ರ ಹೆಸಾಲನ ಸೂಕ್ಷ್ಮಾಂಗಗಳೆಂಬ (ಹೆಸಾಲ್ಸ್ ಕಾರ್ಪಸಲ್ಸ್) ಕೋಶಗಳ ಗುಂಪುಗಳು ಇವೆ. ಪ್ರತಿಯೊಂದು ಸೂಕ್ಷ್ಮಾಂಗದ ಮಧ್ಯಭಾಗದಲ್ಲಿ ಒಂದೆರಡು ದುಂಡಾದ ಕೋಶಗಳು. ಅವುಗಳ ಸುತ್ತ ಈರುಳ್ಳಿ ಸಿಪ್ಪೆಗಳಂತೆ ಒಂದರಮೇಲೆ ಹೊದ್ದುಕೊಂಡಿರುವ ಹಲವಾರು ಶುಷ್ಕಕೋಶಗಳು - ಇದಿಷ್ಟು ಈ ಸೂಕ್ಷ್ಮಾಂಗಗಳ ರಚನೆ. ಮಧ್ಯಮ ಕೋಶಗಳಲ್ಲಿ ಅನ್ಯಕೋಶಗಳ ಅವಶೇಷಗಳು ಇರುವುದೂ ಉಂಟು. ವಯಸ್ಸಾದಂತೆ ತಂತುಗಳು ಹಾಗೂ ಕೊಬ್ಬು ಅಲ್ಲಲ್ಲಿ ಶೇಖರವಾಗಿ ಸಾಕ್ಷಾತ್ ಥೈಮಸ್ಸಿನ ಕೋಶಗಳ ಸಂಖ್ಯೆ ಕಡಿಮೆ ಆಗಿ ತಿರುಳು ಗಡುಸಾಗಿ ಚಿಕ್ಕಳದಂತಾಗುತ್ತದೆ. ಎಳೆಪ್ರಾಣಿಗಳ ಥೈಮಸ್ಸು ತಿನ್ನಲು ಬಲುರುಚಿ. ಥೈಮಸ್ಸು ಭ್ರೂಣದ ಗಂಟಲಿನ ಭಾಗದ 3 ನೆಯ ಸಂಚಿಯಿಂದ (ಫೆರಿನ್‍ಜಿಯಲ್ ಪೌಚ್) ಬೆಳೆದುಬಂದ ಅಂಗ. ಪ್ರಾರಂಭದಲ್ಲಿ ಇದು ಒಳಪದರ (ಎನ್‍ಡೊಡರ್ಮ್) ಕೋಶಗಳ ಒಟ್ಟಿಲು ಮಾತ್ರ. ಕ್ರಮೇಣ ಸುತ್ತಲಿನ ದುಗ್ಧರಸನಾಳಜಾಲ ಒಳಹೊಕ್ಕು ರಚನೆಯನ್ನು ಸಡಿಲಪಡಿಸುತ್ತದೆ. ಅನಂತರ ಹೊರಗಿನಿಂದ ರಕ್ತದಮೂಲಕ ದುಗ್ಧರಸಕಣಗಳು ಬಂದು ನೆಲೆಸಿ ಗುಣಿತಗೊಳ್ಳತೊಡಗುವುವು. ಥೈಮಸ್ಸಿನ ಒಳಗಿರುವ ಕಣಗಳು ಈ ರೀತಿ ಹೊರಗಿನಿಂದ ವಲಸೆಬಂದ ದುಗ್ಧರಸಕಣಗಳೇ ಅದರೂ ಇತರ ದುಗ್ಧರಸಕಣಗಳಿಂದ ಭಿನ್ನವಾಗಿರುತ್ತವೆ. ಥೈಮಸ್‍ಕಣಗಳಲ್ಲಿ ಮೈಟೊಕಾಂಡ್ರಿಯ, ಜಾಲ ರಚನೆ ಮುಂತಾದ ಕೋಶ ವೈಶಿಷ್ಟ್ಯಗಳು ಚೆನ್ನಾಗಿ ವ್ಯಕ್ತವಾಗಿರುವುದಿಲ್ಲ. ದುಗ್ಧರಸಕಣಗಳ ಸಂಖ್ಯಾವೃದ್ಧಿಯನ್ನು ಉಂಟುಮಾಡುವ ಪ್ರಚೋದನೆಗಳು ಥೈಮಸ್ ಕಣಗಳ ಸಂಖ್ಯಾವೃದ್ಧಿಯನ್ನು ಉಂಟುಮಾಡುವುದಿಲ್ಲ. ದುಗ್ಧರಸಕಣಗಳ ಆಯುಷ್ಯ ಹಲವಾರು ತಿಂಗಳುಗಳು - ಬಹುಶಃ ವರ್ಷಗಳೇ. ಥೈಮಸ್‍ಗಳ ಕಣಗಳ ಆಯುಷ್ಯವಾದರೋ 3 - 4 ದಿವಸಗಳು ಮಾತ್ರ. ಆದ್ದರಿಂದ ಥೈಮಸ್ ಕಣಗಳನ್ನು ಬೇರೆ ಎಂದೇ ಗಣಿಸಿ ಅವನ್ನು ತೈಮೊಸೈಟ್‍ಗಳೆಂದು ಕರೆಯಲಾಗಿದೆ. 

ವ್ಯಕ್ತಿಯಲ್ಲಿ ಥೈಮಸ್ಸಿನ ಅಸ್ತಿತ್ವದ ಅವಧಿ ಹಾಗೂ ಅದರ ಕ್ರ್ರಿಯೆಯ ವಿಷಯವಾÀಗಿ ಬಹುಕಾಲದಿಂದಲೂ ವಿವಾದವಿದೆ. ಶೈಶವ ಬಾಲ್ಯದಲ್ಲಿ ಮಾತ್ರ ಗಣನೀಯ ಗಾತ್ರವಾಗಿರುವ ಥೈಮಸ್ ಹದಿವಯಸ್ಸಿನಲ್ಲಿ ಉಡುಗುವುದಕ್ಕೆ ಪ್ರಾರಂಭಿಸಿ ನಡುವಯಸ್ಸಿನ ಹೊತ್ತಿಗೆ ಹೆಚ್ಚು ಕಡಿಮೆ ಪೂರ್ಣವಾಗಿ ನಾಶವಾಗಿ ಹೋಗುತ್ತದೆ ಎಂದೂ ಏನಿದ್ದರೂ ಅದರ ಕ್ರಿಯೆ ಬೆಳೆಯುವ ವಯಸ್ಸಿನಲ್ಲಿ _ ಹೇಗೂ ಅದರಲ್ಲಿರುವ ರಕ್ತಕಣಗಳ ಅಗತ್ಯ ಬೆಳೆಯುವ ವಯಸ್ಸಿನಲ್ಲೇ ಹೆಚ್ಚಾಗಿರುತ್ತದೆ ಎಂದೂ ಬೆಳೆವಣಿಗೆ ಮುಗಿಯುತ್ತ ಲೈಂಗಿಕಚಟುವಟಿಕೆ ಪ್ರಾರಂಭವಾದಂತೆ ಥೈಮಸ್ಸಿನ ಪ್ರಾಮುಖ್ಯ ಕುಗ್ಗುತ್ತವೆ ಎಂದೂ ವಿವರಿಸಲಾಗುತ್ತಿತ್ತು. ಇದು ಸುಮಾರು 200 ವರ್ಷಗಳಿಂದ ವಿe್ಞÁನಿಗಳು ವ್ಯಕ್ತಪಡಿಸುತ್ತಿದ್ದ ದೃಷ್ಟಿ. 1900 ರಲ್ಲಿ ಬಿಯರ್ಡ್ ಎಂಬಾತ ದೇಹಕ್ಕೆ ಅಗತ್ಯವಾದ ವರ್ಣರಹಿತ ಕಣಗಳು ತಯಾರಾಗುವ ಸ್ಥಳಗಳಲ್ಲಿ ಥೈಮಸ್‍ಕಣಗಳು ಬೀಜಗಳಂತೆ ನೆಡಲ್ಪಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದ. 1938 ರಲ್ಲಿ ಹ್ಯಾಮರ್ ಎಂಬಾತ ದೇಹದಲ್ಲಿ ಥೈಮಸ್ ಪ್ರತಿವಿಷಯಗಳನ್ನು ತಯಾರಿಸುತ್ತವೆಂಬ ತೀರ್ಮಾನಕ್ಕೆ ಬಂದ. ಹೊರನೋಟಕ್ಕೆ ಥೈಮಸ್ ಒಂದು ನಿರ್ನಾಳಗ್ರಂಥಿಯಂತೆ ಇದ್ದು ಅದು ಒಂದು ಅಂತಃಸ್ರಾವಕ ಗ್ರಂಥಿ ಎಂಬ ವಿಷಯದ ಪರ ಹಾಗೂ ವಿರುದ್ಧವಾಗಿ ಬಲುಕಾಲದಿಂದಲೂ ಜಿe್ಞÁಸೆ ಇದ್ದೇ ಇದೆ. ಅದು ಒಂದು ಅಂತಃಸ್ರಾವಿ ಎಂಬುದು ನಿಜ ಅಥವಾ ಸುಳ್ಳು ಎಂದು ಪ್ರಯೋಗಗಳಿದ ರುಜುವಾತು ಮಾಡುವುದಕ್ಕೆ ಸಾಧ್ಯವಾಗಿಲ್ಲ. ವಯಸ್ಸಾದ ಮೇಲೂ ಥೈಮಸ್ಸಿನ ಗಾತ್ರ ಉಡುಗದೆ ಇದ್ದವರಲ್ಲಿ ತೀವ್ರ ರೀತಿಯ ಉಬ್ಬಸರೋಗ ಕಂಡುಬರುವುದೆಂದೂ ಅನೇಕರು ಇದ್ದಕ್ಕಿಂದ್ದಂತೆ ಮೃತರಾಗುವರೆಂದೂ ತಿಳಿದಿತ್ತು. ಬಹುಶಃ ಥೈಮಸ್ಸಿಗೂ ಈ ಸಂದರ್ಭಗಳಿಗೂ ನೇರಸಂಬಂಧ ಇಲ್ಲ. ಅಡ್ರಿನಲ್ ಗ್ರಂಥಿಯ ಹಠಾತ್ ಕ್ರಿಯಾನಾಶ ಅನೇಕವೇಳೆ ಹಠಾತ್ ಮರಣಕ್ಕೂ ಸಂಬಂಧ ಕಲ್ಪಿಸುವುದಿಲ್ಲ. ಅಡ್ರಿನಲ್ ಗ್ರಂಥಿಯ ಹಾಗೂ ಪ್ರಜನನಾಂಗಗಳ ಹಾರ್ಮೊನುಗಳು ರೋಗಕಾರಣದಿಂದಾಗಲಿ ಕೃತಕಪ್ರಚೋದನೆಯಿಂದಾಗಲಿ ಸೂಜಿಮದ್ದಾಗಿ ಒಳ ಸೇರಿಸುವಿಕೆಯಿಂದಾಗಲಿ ಅಧಿಕಪ್ರಮಾಣದಲ್ಲಿ ಇರುವಂತಾದರೆ ಥೈಮಸ್ಸು ಶೋಷಿಸಿ ಹೋಗುವುದು ತಿಳಿದಿದೆ. ಬಹುಶಃ ಇದಕ್ಕೆ ವಿಪರ್ಯಾಯವಾಗಿ ಥೈಮಸ್ಸಿನ ಕ್ರಿಯಾಧಿಕ್ಯದಿಂದ ಯಾವಾಗಲೋ ಅಡ್ರಿನಲ್ ಗ್ರಂಥಿಯ ಕ್ರಿಯಾನಾಶ ಉಂಟಾಗಿ ಹಠಾತ್ ಮರಣ ಸಂಭವಿಸಬಹುದು. 1960 ರಿಂದ ಈಚಿನ ವ್ಯಾಸಂಗಗಳಿಂದ ಸೋಂಕು ವಿಷಗಳ ವಿರುದ್ಧ ದೇಹ ರಕ್ಷಣೆಯ ಹೊಮ್ಮಿಕೆಯಲ್ಲಿ ಥೈಮಸ್ಸಿನ ಪಾತ್ರ ಬಲು ಹೆಚ್ಚು ಎನ್ನುವುದು ವ್ಯಕ್ತವಾಗಿದೆ. Àಚನೆಯಲ್ಲಿ ಥೈಮಸ್ಸು ಸ್ಥೂಲವಾಗಿ ಇತರ ದುಗ್ಧರಸಾಂಗಗಳಂತೆ ಇರುವುದು ಮುಂಚಿನಿಂದಲೂ ತಿಳಿದ ವಿಷಯ. ಇತ್ತೀಚಿನ ವ್ಯಾಸಂಗಗಳಲ್ಲಿ ಪ್ರಬಲ ಸೂಕ್ಷ್ಮದರ್ಶಕಗಳೂ ಗಣನೀಯವಾಗಿ ಹೆಚ್ಚಿನ ವಿವರಣೆಯನ್ನು ಒದಗಿಸಿಲ್ಲ. ಆದರೆ ವಿವಿಧ ಪ್ರಚೋದಕಗಳು ಥೈಮಸ್ಸಿನಲ್ಲೂ ಮಿಕ್ಕ ದುಗ್ಧರಸಾಂಗಗಳಲ್ಲೂ ಬೇರೆ ಬೇರೆ ಪರಿಣಾಮಗಳನ್ನು ಉಂಟುಮಾಡುವ, ಅಂತೆಯೇ ಥೈಮಸ್ಸಿನ ನಿರ್ಮೂಲನ  ಪ್ರಚೋದನೆಗಳು ಪಕ್ಷಿಕುಲದಲ್ಲಿ ಫ್ಯಾಬ್ರೀಷಿಯಸ್ಸಿನ ಬರ್ಸ ಎಂಬ ಅಂಗದ ನಿರ್ಮೂಲನ ಪ್ರಚೋದನೆಗಳಿಂದ ಉಂಟಾಗುವ ಪರಿಣಾಮಗಳಂಥವನ್ನೇ ಉಂಟುಮಾಡುವುದು ವ್ಯಕ್ತವಾಗಿದೆ. ಬಹುಶಃ ಥೈಮಸ್ ಹಾಗೂ ಪ್ರಯಾಬ್ರೀಷಿಯಸ್ಸಿನ ಬರ್ಸ - ಇವು ಇವು ಮೂಲ ದುಗ್ಧರಸಗ್ರಂಥಿಗಳು. ಇವುಗಳ ನೆರವಿನಿಂದ ಭ್ರೂಣದಲ್ಲಿ ಮಿಕ್ಕವು ಉದ್ಭವಿಸಿ ಇವುಗಳ ಅಂಕೆಯಂತೆ ಕ್ರಿಯೆಯುಳ್ಳವಾಗಿರುತ್ತವೆ ಎಂಬ ಭಾವನೆ ಮೂಡಿದೆ. ಇದು ನವೀನ ಪ್ರಯೋಗಗಳ ಫಲ. 1964 ರಲ್ಲಿ ಮೆಟ್‍ಕಾಫ್ ಎಂಬುವ 3 - 4 ದಿವಸಗಳಷ್ಟು ಅಲ್ಪಾಯುಸ್ಸಿನ ಕೋಶಗಳು ಥೈಮಸ್ಸಿನಲ್ಲಿ ಅಸಂಖ್ಯಾತವಾಗಿ ಉತ್ಪತ್ತಿಯಾಗುವುದನ್ನು ಖಚಿತವಾಗಿ ತೋರಿಸಿ ಇದಕ್ಕೆ ಯಾವುದೋ ಪ್ರಬಲ ಕಾರಣವಿರಬೇಕು ಎನ್ನುವ ತೀರ್ಮಾನಕ್ಕೆ ಬಂದ. 1965 - 66 ರಲ್ಲಿ ಸಾಲ್‍ವಿನ್, ರೋಲ್ಡ್‍ಸ್ಟೆಯ್ನ್ ಮುಂತಾದವರು ಮಯಾಸ್ಥೀನಿಯ ಗ್ರೇವಿಸ್ ಎಂಬ ರೋಗಕ್ಕೂ ಥೈಮಸ್ಸಿನಗೂ ಇರುವ ಸಂಬಂಧವನ್ನು ಗಣಿಸಿ ಬಹುಶಃ ಥೈಮಸ್ ವಿಷವಸ್ತು ನಿರ್ಮೂಲನ ಕ್ರಮದಲ್ಲಿ ಪಾತ್ರವಹಿಸುತ್ತದೆಂದು ಸೂಚಿಸಿದರು. ಸಿನ್ ಮುಂತಾದವರು 1965 ರಿಂದ ಈಚೆಗೆ ನಡೆಸಿದ ವ್ಯಾಸಂಗಗಳಿಂದ ರಕ್ತದ ಎಲ್ಲ ಬಗೆಯ ಕಣಗಳ ಸಂಖ್ಯಾವೃದ್ಧಿಯಲ್ಲೂ ಥೈಮಸ್ ಭಾಗವಹಿಸುತ್ತದೆಂದೂ ಅದು ರೋಗಗ್ರಸ್ತವಾದರೆ ಅಲ್ಪಕಣರಕ್ತತೆ (ಎಪ್ಲಾಸ್ಟಿಕ್ ಅನೀಮಿಯ), ಸೋಂಕುವಿಷಯಗಳ ವಿರುದ್ಧ ತಗ್ಗಿದ ರಕ್ಷಣೆ ಮುಂತಾದವು ಉಂಟಾಗುವುವೆಂದೂ ಸ್ಥಿರಪಡಿಸಿದರು.

ಥೈಮಸ್ಸಿನ ವಿಶಿಷ್ಟಕ್ರಿಯೆ ಎಂದು ಇಂದು ಒಪ್ಪಿಕೊಂಡಿರುವುದು ದುಗ್ಧರಸಕಣಗಳ ಸಂಖ್ಯಾವೃದ್ಧಿ ಮತ್ತು ರೋಧಕಜನಕಕಣಗಳನ್ನು ಅಗತ್ಯವೆನಿಷುವಷ್ಟು ವೈವಿದ್ಯ ಹಾಗೂ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿಟ್ಟಿರುವುದು. ಇವೆರಡೂ ಪರಸ್ಪರ ಸಂಬಂಧಪಟ್ಟಿವೆಯೇ ಎಂಬುದು ವ್ಯಕ್ತವಾಗಿಲ್ಲ. ಥೈಮಸಿನಲ್ಲಿ ಅಗಾಧ ಸಂಖ್ಯೆಯಲ್ಲಿ ವೃದ್ಧಿಸುತ್ತಿರುವ ಕಣಗಳು ಮೂಲತಃ ಮಜ್ಜೆ ಮುಂತಾದ ಕಡೆಗಳಿಂದ ವಲಸೆ ಬಂದು ನೆಲೆಸಿದ ವಿವಿಧರೀತಿಯ ಕಣಗಳು. ಆಂತರಿಕ ಪ್ರಚೋದನೆಯಿಂದಲೇ ಇವು ವೃದ್ಧಿಸುತ್ತವೆ. ಹೀಗೆ ಉತ್ಪತ್ತಿಯಾದ ಕಣಗಳಲ್ಲಿ ಸುಮಾರು 95% ಕಣಗಳು 3 - 4 ದಿವಸಗಳಲ್ಲೇ ಥೈಮಸ್ಸಿನಲ್ಲಿ ನಾಶವಾಗುತ್ತವೆ. ಬಹುಶಃ ಇಷ್ಟು ತ್ವರಿತವಾದ ಕೋಶಗುಣಿತದಿಂದ ಕಣಗಳಲ್ಲಿ ಅಸಂಖ್ಯಾತ ವೈವಿಧ್ಯ ಉಂಟಾಗಬಹುದು. ಅಷ್ಟು ವಿಧಗಳಲ್ಲಿ ದೇಹಕ್ಕೆ ಉಪಯುಕ್ತವಾದ ವಿಧಗಳು ಮಾತ್ರ ಉಳಿದುಕೊಂಡು ಅಪಾಯಕರವಾದ ವಿಧಗಳೆಲ್ಲ ನಾಶವಾಗುತ್ತವೆಂದೂ ಥೈಮಸ್ಸಿನ ಆಂತರಿಕಕೋಶಗಳು ಇಂಥ ವಿಂಗಡಣೆ ಹಾಗೂ ನಾಶದಲ್ಲಿ ಪಾತ್ರವಹಿಸುತ್ತವೆಂದೂ ಊಹಿಸಲಾಗಿದೆ. ಆದರೆ ವಿಂಗಡಣೆ ಯಾವ ರೀತಿಯಲ್ಲಿ ಆದೀತು ಎನ್ನುವುದು ತಿಳಿಯದು. ವಿಂಗಡಣೆ ನಾಶಗಳು ತಕ್ಕಷ್ಟು ಕ್ಷೇಮರೀತಿಯಲ್ಲಿ ಜರುಗುವುದಿಲ್ಲವೇನೋ ಎಂದೂ ಅನ್ನಿಸಿದೆ. ಅಳಿಯದೆ ಉಳಿದ ಕಣಗಳು ಬೇರೆಡೆ ವಲಸೆಹೋಗಿ ನೆಲೆಸುವುದೂ ಅಗತ್ಯ ಕಾಲದಲ್ಲಿ ಅಲ್ಲೆ ಪ್ರಚೋದನೆಗೊಂಡು ಸಂಖ್ಯಾವೃದ್ಧಿ ಆಗುವುದೂ ಥೈಮಸ್ಸನ್ನೇ ಅವಲಂಬಿಸಿದೆ. ಪರಿಸರದ ಒತ್ತಾಯದ ಫಲವಾದ ಶ್ರಮ ಜೀವನವನ್ನು ಎದುರಿಸಲು ಅನುವಾಗುವ ಅಡ್ರಿನಲ್ ಗ್ರಂಥಿಯ ಹಾರ್ಮೋನುಗಳು ಥೈಮಸ್ಸಿನ ಕಣಗಳಿಗೆ ಮಾರಕ ಎಂದು ಹಿಂದೆ ಹೇಳಿದೆ. ಥೈಮಸ್ ಕಣಗಳ ಅಗಾಧ ನಾಶದಿಂದ ಪರಿಸರದ ಒತ್ತಾಯವನ್ನು ಎದುರಿಸುವ ಸಾಮಥ್ರ್ಯ, ದೇಹದ ರಿಪೇರಿ ಇತ್ಯಾದಿಗಳಿಗೆ ಅನುಕೂಲವಾಗುವ ಯಾವುದಾದರೂ ವಸ್ತುಗಳ ಬಿಡುಗಡೆ ಆಗುವುದೋ ತಿಳಿಯದು.

ಥೈಮಸ್ಸಿನ ನಿರ್ಮೂಲನದ ನೇರ ಪರಿಣಾಮ ದೇಹದ ರೋಧಸಾಮಥ್ರ್ಯದ ಬಲಗುಂದುವಿಕೆ. ರೋಧಜನಕಕೋಶಗಳ ಸಂಖ್ಯೆ ತಗ್ಗುವುದರಿಂದ ಹೀಗಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಶೈಶವದಲ್ಲಿ ಥೈಮಸ್ಸನ್ನು ನಿರ್ಮೂಲಮಾಡಿದರೆ ಇದು ಕೂಡಲೆ ವ್ಯಕ್ತವಾಗುವ ಪರಿಣಾಮ, ಆದರೆ ಎಲ್ಲ ರೀತಿಯ ರೋಧಕಗುಣಗಳೂ ಒಂದೇ ಸಮವಾಗಿ ಕುಂದಿಹೋಗುವುದಿಲ್ಲ. ರೋಧಕ ಗ್ಲಾಬ್ಯುಲಿನ್‍ಗಳ ತಯಾರಿಕೆಯ ನಿಯಂತ್ರಣ ಬೇರೆಯೇ ಬಹುಶಃ ಅನ್ನನಾಳಕ್ಕೆ ಸಂಬಂಧಿಸಿದ ದುಗ್ಧರಸಗ್ರಂಥಿಗಳಲ್ಲಿ ಈ ವಸ್ತುಗಳು ತಯಾರಾಗುತ್ತವೆ.  ಥೈಮಸ್ಸಿನಿಂದ ಉತ್ಪತ್ತಿಯಾದ ಕೋಶಗಳು ಸ್ವಜಾತಿಯ ವಸ್ತುಗಳ ಗುರುತು ಹಿಡಿಯುವ ಕ್ರಿಯೆಗೆ ಮೀಸಲು. ಆದ್ದರಿಂದ ವಿಸರ್ಜನೆ ಮಾಡತಕ್ಕೆ ರೋಧಜನಕ ಕಣಗಳು ಉತ್ಪತ್ತಿಯಾಗುವುದಿಲ್ಲ. ಬೆಳೆದ ವ್ಯಕ್ತಿಯಲ್ಲಿ ಥೈಮಸ್ಸಿನ ನಿರ್ಮೂಲನ ಇಷ್ಟು ಶೀಘ್ರವಾಗಿ ಪರಿಣಮಿಸುವುದಿಲ್ಲ.  ನಿರ್ಮೂಲನಕ್ಕೆ ಮೊದಲೇ ತಯಾರಾಗಿ ಎಲ್ಲೆಲ್ಲೊ ನಿಲೆಸಿರುವ ರೋಧಜನಕಕೋಶಗಳು ಕೆಲವು ತಿಂಗಳುಗಳ ಪರ್ಯಂತ ಅಸ್ತಿತ್ವದಲ್ಲಿದ್ದು ದೇಹರಕ್ಷಣೆಯನ್ನು ಒದಗಿಸುತ್ತವೆ. ಕ್ರಮೇಣ ಇವುಗಳ ಸಂಖ್ಯೆ ಕಡಿಮೆ ಆಗುತ್ತ ಕೊನೆಗೆ ರೋಧ ಸಾಮಥ್ರ್ಯವೇ ಕುಂದಿಹೋಗುತ್ತದೆ. ಥೈಮಸ್ಸಿನಿಂದ ವಲಸೆಹೋಗುವ ಕೋಶಗಳು ಬಲು ಕಡಿಮೆ. ಆದರೆ ಇವು ದೇಹದ ರೋಧಕ ಕ್ರಿಯೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎಂದು ತೋರುವುದು. ಬಹುಶಃ ರೊಧಕಗಳನ್ನು ಉತ್ಪತ್ತಿಮಾಡಬಲ್ಲ ಕೋಶಗಳು ಮೊದಲು ಮಜ್ಜೆ ಮುಂತಾದ ಸ್ಥಳಗಳಿಂದ ವಲಸೆ ಹೋಗಿ ಥೈಮಸ್ಸಿನಲ್ಲಿ ನೆಲೆಸುತ್ತವೆ. ಅನಂತರ ಯಾವಾಗಲಾದರೂ ಒಮ್ಮೊಮ್ಮೆ ಇಂಥ ಕೋಶಗಳು ಥೈಮಸ್ಸಿನಿಂದ ಹೊರಗೆ ಹೋಗಿ ನೆಲೆಸಿ ಅಲ್ಲಿ ತಮ್ಮ ಕಾರ್ಯವನ್ನು ಸಾಧಿಸುತ್ತವೆ. ಅವುಗಳ ಕ್ರಿಯೆಗೆ ಥೈಮಸ್ಸಿನ ನೆರವು ಬೇಕಿಲ್ಲ. ಆದರೆ ಅವು ಕಾರಣಾಂತರದಿಂದ ನಾಶಹೊಂದುತ್ತಲೇ ಇರುತ್ತವೆ. ರೋಧಜನಕಗಳ ಸಂಖ್ಯೆ ತಕ್ಕಷ್ಟು ಪ್ರಮಾಣದಲ್ಲಿ ಉಳಿದಕೊಂಡು ಬರಬೇಕಾದರೆ ಅವು ಎಲ್ಲಿ ನೆಲೆಸಿರುವುವೋ ಅಲ್ಲೇ ಗುಣಿತಗೊಳ್ಳಬೇಕು. ಇಲ್ಲವೇ ಹೊಸ ಹೊಸದಾಗಿ ಥೈಮಸ್ಸಿನಿಂದ ವಲಸೆ ಬಂದುನೆಲೆಸುತ್ತಿರಬೇಕು. ಇವೆರಡಕ್ಕೂ ಥೈಮಸ್ಸಿನ ಅಸ್ತಿತ್ವ ಅಗತ್ಯ. ಥೈಮಸ್ ಕಳೆದ ಎಳೆಯ ಪ್ರಾಣಿಗೆ ಬೇರೆ ಥೈಮಸ್ಸನ್ನು ನಾಟಿಹಾಕಿ ಅದರಿಂದ ಏನೂ ಹೊರಬಂದು ದೇಹದ ಮಿಕ್ಕೆಡೆ ವ್ಯಾಪಿಸದಂತೆ ನೋಡಿಕೊಂಡರೆ ರೋಧಜನಕಕಣಗಳ ಸಂಖ್ಯಾಕ್ಷೀಣತೆಯನ್ನು ತಪ್ಪಿಸುವುದಕ್ಕಾಗುವುದಿಲ್ಲ. ಅದೇ ಥೈಮಸ್ಸನಿಂದ ಕಣಗಳಿಲ್ಲದಿದ್ದರೂ ಚಿಂತೆ ಇಲ್ಲ, ದ್ರವ ದೊರಕುವಂತಾದರೂ ಸಂಖ್ಯಾ ಪ್ರಮಾಣ ಕುಗ್ಗುವುದಿಲ್ಲ. ಆದ್ದರಿಂದ ಥೈಮಸ್ಸಿನಿಂದ ಯಾವುದೋ ಹಾರ್ಮೋನ್ ಉತ್ಪಾದಿತವಾಗಿ ರೋಧಜನಕಕಣಗಳ ಗುಣಿತಕ್ಕೆ ಸಾಧಕವಾಗಿರುತ್ತದೆ ಎನಿಸುತ್ತದೆ. ಆದರೆ ಯಾವ ಇಂಥ ಹಾರ್ಮೊನನ್ನೂ ಥೈಮಸ್ಸನಿನಿಂದ ಇನ್ನೂ ಬೇರ್ಪಡಿಸಲಾಗಿಲ್ಲ.

ಥೈಮಸ್ಸಿನ ಕ್ರಿಯೆಯನ್ನು ನಿಯಂತ್ರಿಸುವ ಹೊರಗಿನ ಪ್ರಭಾವವೂ ವ್ಯಕ್ತವಾಗಿಲ್ಲ. ಬಹುಶಃ ದೇಹದ ಬೇರೆಡೆಗಳಲ್ಲಿ ರೋಧಜನಕ ಕೋಶಗಳನ್ನು ಪ್ರಚೋದಿಸುವುದೆಂದು ಭಾವಿಸಿರುವ ಕಾಲ್ಪನಿಕ ಥೈಮಸ್ ಹಾರ್ಮೋನೇ ಸ್ವತಃ ಥೈಮಸ್ಸನಿನ ಕ್ರಿಯೆಯನ್ನು ನಿಯಂತ್ರಿಸುವುದೆಂದು ತೋರುತ್ತದೆ. ಥೈಮಸ್ಸಿನ ಗಾತ್ರ ಹೆಚ್ಚಿ ಅದರ ಕ್ರಿಯಭ್ರಷ್ಟತೆಯಿಂದ ವಿನಾಕಾರಣ ಛಿದ್ರತೆ, ಪರ್ಪುರಲೂಪಸ್, ಮಯಸ್ಥೀನಿಯಗ್ರೇವಿಸ್, ಹ್ಯಾಷಿಮೋಟೋರೋಗ ಇತ್ಯಾದಿಯಾಗಿ ಅನೇಕ ರೋಗಗಳು ಉಂಟಾಗುತ್ತವೆಂದು ನಂಬಲಾಗಿದೆ. ಬಹುಶಃ ದೇಹಕ್ಕೆ ಅಪಾಯಕರವಾದ ವಸ್ತುಗಳನ್ನು ಉತ್ಪತ್ತಿಮಾಡುವ ಕಣಗಳು ಥೈಮಸ್ಸಿನಲ್ಲಿ ವೃದ್ಧಿಸಿ ನಾಶಗೊಳ್ಳದೆ ಉಳಿದುಕೊಳ್ಳವುದರಿಂದ ಇಂಥ ರೋಗಗಳು ಉಂಟಾಗುತ್ತವೆ.		
	(ಎಸ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ